ಬೆಂಗಳೂರು,ಏ,೧೩:ಬೆಲೆ ಏರಿಕೆ ಕುರಿತು ಕೇಂದ್ರ ಯುಪಿಎ ಸರ್ಕಾರದ ವಿರುದ್ಧ ಹೋರಾಟ ಮಾಡುವ ಮುನ್ನ ರಾಜ್ಯದಲ್ಲಿ ಬೆಲೆ ಸ್ಧಿರೀಕರಣಕ್ಕೆ ಬಿಜೆಪಿ ಸರ್ಕಾರ ಮುಂದಾಗಬೇಕು ಎಂದು ಹೇಳಿರುವ ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್ ಸಿಂಧ್ಯಾ, ಜನಸಾಮಾನ್ಯರ ಬಗ್ಗೆ ಬಿಜೆಪಿಗೆ ನಿಜಕ್ಕೂ ಕಳಕಳಿ ಇದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸಿರುವ ಪರಿಣಾಮ ಜನ ಸಾಮಾನ್ಯರು ತತ್ತರಿಸುವಂತಾಗಿದೆ. ಇದು ಬೆಲೆ ಏರಿಕೆಗೆ ನೇರ ಕಾರಣವಾಗಿದೆ. ಹಾಗಾಗಿ ಬಿಜೆಪಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಬೇಕೆಂದರು.
ಇಡೀ ದೇಶದಲ್ಲಿನ ಪರಿಸ್ಧಿತಿಯನ್ನು ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಾಗಿದೆ. ಯುಪಿಎ ಸರ್ಕಾರದ ಧೋರಣೆಗಳಿಂದಾಗಿ ಬೆಲೆ ಏರಿಕೆಯಾಗಿದೆ. ಆದರೆ ಅದೇ ರೀತಿ ರಾಜ್ಯ ಬಿಜೆಪಿ ಸರ್ಕಾರದ ಧ್ಯೇಯ ಧೋರಣೆಗಳು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.
ಪ್ರತಿವರ್ಷ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ದಿತ ತೆರಿಗೆಯಿಂದ ಬೊಕ್ಕಸಕ್ಕೆ ಸುಮಾರು ನಾಲ್ಕು ಸಾವಿರ ಕೋಟಿ ರೂ ಸಂಪನ್ಮೂಲ ಕ್ರೋಢೀಕರಣವಾಗುತ್ತಿದೆ. ಈಗಿರುವ ತೆರಿಗೆಯಲ್ಲಿ ಶೇ ೫೦ ರಷ್ಟು ಅಂದರೆ ಪ್ರತಿಶತ: ಎರಡರಷ್ಟು ವ್ಯಾಟ್ ತೆರಿಗೆ ಕಡಿತಮಾಡಿದರೆ ಸಮಸ್ಯೆ ಸಾಕಷ್ಟು ಮಟ್ಟಿಗೆ ನಿವಾರಣೆಯಾಗುತ್ತದೆ ಎಂದು ಸಲಹೆ ನೀಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಹಾಗೂ ಬೆಲೆ ಏರಿಕೆ ವಿರುದ್ಧ ಈ ತಿಂಗಳ ೨೭ ರಂದು ೧೩ ಪ್ರಮುಖ ಪಕ್ಷಗಳ ಮುಖಂಡತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುವುದು. ಸರ್ಕಾರದ ಜನ ವಿರೋಧಿ ನೀತಿಗಳ ಬಣ್ಣ ಬಯಲು ಮಾಡಲಾಗುವುದು ಎಂದು ಸಿಂಧ್ಯಾ ಎಚ್ಚರಿಕೆ ನೀಡಿದರು.
ಗ್ರಾ.ಪಂ. ಕೇಸರೀಕರಣ: ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ವಿಜಯ ಸಂಕಲ್ಪ ಯಾತ್ರೆಯ ಮೂಲಕ ಪಂಚಾಯತ್‌ಗಳನ್ನು ಕೇಸರೀಕರಣ ಮಾಡಲು ಹೊರಟಿದೆ. ಇದರಿಂದ ಅಧಿಕಾರ ವಿಕೇಂದ್ರೀಕರಣ ವ್ಯವಸ್ಧೆಗೆ ಮಾರಕವಾಗಲಿದೆ ಎಂದು ಸಿಂಧ್ಯಾ ಆತಂಕ ವ್ಯಕ್ತಪಡಿಸಿದರು.
ಪಂಚಾಯತ್ ವ್ಯವಸ್ಧೆ ಜಾರಿಗೆ ಬಂದ ನಂತರದಿಂದ ಇಲ್ಲಿಯವರೆವಿಗೆ ಯಾವುದೇ ಪಕ್ಷ ಗ್ರಾಮ ಪಂಚಾಯತ್ ವ್ಯವಸ್ಧೆಯಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ. ಈ ಸರ್ಕಾರ ಅಂತಹ ದುಸ್ಸಾಸಹಕ್ಕೆ ಕೈಹಾಕಿದೆ. ಇದು ಪ್ರಜಾತಂತ್ರ ವಿರೋಧಿ ನಡೆ ಎಂದು ಕಿಡಿಕಾರಿದರು.
ಪಂಚಾಯತ್‌ಗಳಲ್ಲಿ ಪಕ್ಷ ರಾಜಕಾರಣ ಮಾಡಬಾರದು. ರಾಜಕೀಯ ಪಕ್ಷಗಳು ಈ ಚುನಾವಣೆಯಲ್ಲಿ ಬಿಫಾರಂ ನೀಡಬಾರದು. ಅಭ್ಯರ್ಥಿಗಳನ್ನು ಮಾತ್ರ ಗುರುತಿಸಬೇಕು. ಉಳಿದಂತೆ ಯಾವುದೇ ಹಸ್ತಕ್ಷೇಪಕ್ಕೆ ಇಲ್ಲಿ ಅವಕಾಶ ಇರಬಾರದು. ಆದರೆ ಬಿಜೆಪಿ ಸರ್ಕಾರದ ನೀತಿ ಸರಿಯಿಲ್ಲ ಎಂದು ದೂರಿದರು.
ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಪಟ್ಟಂತೆ ಪಕ್ಷದ ಮುಂದಿನ ನಡೆ ಏನು ಎಂಬ ಕುರಿತು ಇದೇ ತಿಂಗಳ ೨೨ ರಂದು ಪಕ್ಷದ ಹಾಲಿ, ಮಾಜಿ ಜನಪ್ರತಿನಿಧಿಗಳ ಸಭೆ ನಡೆಯಲಿದೆ. ದೇವೇಗೌಡರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರೂ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.